೧೯೦೩-೫೦. ಎರಿಕ್ ಬ್ಲೇರ್ ಎಂಬ ಹೆಸರಿನಿಂದ ಬರೆದ ಇಂಗ್ಲಿಷ್ ಕಾದಂಬರಿಕಾರ. ಬಂಗಾಲದ ಮೋತಿಹಾರಿ ಎಂಬಲ್ಲಿ ಹುಟ್ಟಿ ಈಟನ್ನಿನಲ್ಲಿ ವಿದ್ಯಾಭ್ಯಾಸ ಮಾಡಿದ. ಬರ್ಮ ಪೋಲೀಸ್ ಪಡೆಯಲ್ಲಿದ್ದು (೧೯೨೨-೨೭) ತನ್ನ ಅನುಭವಗಳನ್ನು ಬರ್ಮೀಸ್ ಡೇಸ್ ಎಂಬ ಪುಸ್ತಕದಲ್ಲಿ (೧೯೩೪) ವಿವರಿಸಿದ್ದಾನೆ. ಉಪಾಧ್ಯಾಯನಾಗಿ, ಪುಸ್ತಕದ ಅಂಗಡಿಯ ಕೆಲಸಗಾರನಾಗಿ, ಬಡತನದಲ್ಲಿ ಕಳೆದ ಕಾಲವನ್ನು ಡೌನ್ ಅಂಡ್ ಔಟ್ ಇನ್ ಪ್ಯಾರಿಸ್ ಅಂಡ್ ಲಂಡನ್ ಎಂಬ ಪುಸ್ತಕದಲ್ಲಿ (೧೯೩೩) ವರ್ಣಿಸಿದ್ದಾನೆ. ೧೯೩೬ರಲ್ಲಿ ಸ್ಪೇನಿನ ಅಂತರ್ಯುದ್ಧದಲ್ಲಿ ಗಾಯಗೊಂಡು ಹಾಮೇಜ್ ಟು ಕ್ಯಾಟಲೋನಿಯ ಎಂಬ ಪುಸ್ತಕ (೧೯೩೮) ಬರೆದ. ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷ್ ರೇಡಿಯೊ ಪ್ರಸಾರಕ್ಕಾಗಿ ಕೆಲಸ ಮಾಡಿದ. ಅನಿಮಲ್ ಫಾರಂ ಎಂಬ ನಿರಂಕುಶಾಧಿಕಾರದ ವಿಡಂಬನೆಯ ಕಾದಂಬರಿ (೧೯೪೫) ಬರೆದ. ಇದರಲ್ಲಿ ಪ್ರಾಣಿಗಳೆಲ್ಲ ಸಮಾನ; ಆದರೆ ಕೆಲವು ಬೇರೆಯವುಗಳಿ ಗಿಂತ ಹೆಚ್ಚು ಸಮಾನ. ನೈನ್ಟೀನ್ ಎಯ್ಟಿಫೋರ್, ಈತನ ಮರಣಕ್ಕೆ ಸ್ವಲ್ಪ ಮುಂಚೆ ಪ್ರಕಟವಾಯಿತು. ಇದರಲ್ಲಿ ಜನರ ಮನೋವೃತ್ತಿ ನಿರಂಕುಶಾಧಿಕಾರಿಗಳಿಂದ ರೂಪಿಸಲ್ಪಟ್ಟು, ಜಗತ್ತನ್ನು ದುರಂತಕ್ಕೀಡುಮಾಡುವುದೆಂಬ ಕಾಲಭವಿಷ್ಯವನ್ನು ಚಿತ್ರಿಸಿದ್ದಾನೆ.

ಮೊದಲ ಕಾದಂಬರಿಗಳು 
ಕೀಪ್ ದಿ ಆಸ್ಪಿಡಿಸ್ಟ್ರ ಫ್ಲೈಯಿಂಗ್ (೧೯೩೬) 
ದಿ ರೋಡ್ ಟು ವಿಗನ್ ಪಿಯರ್ (೧೯೩೭)
ಕಮಿಂಗ್ ಆಫ್ ಫಾರ್ ಏರ್ (೧೯೩೯) 

ಪ್ರಬಂಧ ಸಂಕಲನಗಳು 
ಇನ್ಸೈಡ್ ದಿ ವೇಲ್ (೧೯೪೦) 
ಷೂಟಿಂಗ್ ಆ್ಯನ್ ಎಲಿಫೆಂಟ್ (೧೯೫೦).	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ